ಹಿರಣ್ಯಕಶಿಪು
	ಒಬ್ಬ ರಾಕ್ಷಸ. ಕಶ್ಯಪ ಮುನಿಯಿಂದ ದಿತಿಯೆಂಬ ಪತ್ನಿಯಲ್ಲಿ ಜನಿಸಿದ ಇಬ್ಬರು ಪುತ್ರರಲ್ಲಿ ಹಿರಿಯವ. ತಮ್ಮ ಹಿರಣ್ಯಾಕ್ಷ, ತಂಗಿ ಸಿಂಹಿಕೆ, ಪತ್ನಿ ಕಯಾಧು. ಪ್ರಹ್ಲಾದ, ಸಂಹ್ಲಾದ, ಅನುಹ್ಲಾದ, ಹ್ಲಾದ, ಶಿಬಿ, ಬಾಷ್ಕಲರು ಪುತ್ರರು. ಬ್ರಹ್ಮನನ್ನು ತಪಸ್ಸಿನಿಂದ ಮೆಚ್ಚಿಸಿದ ಹಿರಣ್ಯಾಕ್ಷನನ್ನು ವಿಷ್ಣು ವರಾಹ ರೂಪದಲ್ಲಿ ಬಂದು ಸಂಹರಿಸಿದ. ತಮ್ಮನನ್ನು ಕೊಂದ ವಿಷ್ಣುವನ್ನು ಹಿರಣ್ಯಕಶಿಪು ದ್ವೇಷಿಸಿದ. ತಾನೂ ಬ್ರಹ್ಮನನ್ನು ತಪಸ್ಸಿನಿಂದ ಮೆಚ್ಚಿಸಿ ತನಗೆ ಬ್ರಹ್ಮಸೃಷ್ಟಿಯ ಯಾವ ಪ್ರಾಣಿಯಿಂದಲೂ ಒಳಗೂ ಹೊರಗೂ ಹಗಲೂ ರಾತ್ರಿಯೂ ಯಾವ ಆಯುಧದಿಂದಲೂ ಮರಣವಾಗದಂತೆ ವರ ಪಡೆದ. ಅದರ ಬಲದಿಂದ ಕೊಬ್ಬಿ, ದಿಕ್ಪಾಲಕರನ್ನೆಲ್ಲ ಸದೆಬಡಿದ. 

	ಹಿರಣ್ಯಕಶಿಪುವಿನ ಮಗ ಪ್ರಹ್ಲಾದ ಮಾತೃಗರ್ಭದಲ್ಲಿದ್ದಾಗ ನಾರದ ಮಹರ್ಷಿಯ ತತ್ತ್ವೋಪದೇಶದಿಂದಲೂ ಜನ್ಮಾಂತರ ಸಂಸ್ಕಾರದಿಂದಲೂ ಪರಮ ವಿಷ್ಣುಭಕ್ತನಾದ. ಇದನ್ನು ಸಹಿಸದ ಹಿರಣ್ಯಕಶಿಪು ಮಗನನ್ನು  ಸಮುದ್ರದಲ್ಲಿ ಮುಳುಗಿಸಿ, ಪರ್ವತದಿಂದ ತಳ್ಳಿಸಿ, ಸರ್ಪಗಳಿಂದ ಕಚ್ಚಿಸಿ, ಆನೆಗಳಿಂದ ತುಳಿಸಿ, ಬೆಂಕಿಯಲ್ಲಿ ನೂಕಿಸಿ, ವಿಷಮಿಶ್ರಿತ ಆಹಾರ ತಿನ್ನಿಸಿ-ನಾನಾ ವಿಧವಾದ ಚಿತ್ರಹಿಂಸೆ ನೀಡತೊಡಗಿದ. ಕಡೆಗೆ ಪ್ರಹ್ಲಾದನನ್ನು ಕೊಲ್ಲಲು ತಾನೇ ಖಡ್ಗ ಎತ್ತಿದ. ಆಗ ವಿಷ್ಣು ನರಸಿಂಹರೂಪ ಧರಿಸಿ ಸಭಾಮಂಟಪದ ಕಂಬದಿಂದ ಹೊರಬಂದು ಸಂಧ್ಯಾಕಾಲದಲ್ಲಿ ಹೊಸ್ತಿಲ ಮೇಲೆ ಕುಳಿತು ಹಿರಣ್ಯಕಶಿಪುವಿನ ದೇಹವನ್ನು ತೊಡೆಯಮೇಲಿಟ್ಟುಕೊಂಡು ಹರಿತವಾದ ಉಗುರುಗಳಿಂದ ಅವನ ದೇಹವನ್ನು ಸೀಳಿ ಕೊಂದ.					
	(ಆರ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ